1846-1899. ಮಲೆಯಾಳಂನ ಪ್ರಸಿದ್ಧ ಕಾದಂಬರಿ ಇಂದುಲೇಖದ ಕರ್ತೃ. ಇದರ ಪ್ರಕಟಣೆಯಿಂದ ಮಲೆಯಾಳಂ ಸಾಹಿತ್ಯಕ್ಕೆ ಗಮನಾರ್ಹವಾದ ಕಾದಂಬರಿಯೊಂದು ಲಭಿಸಿದಂತಾಯಿತು.

ಇಂದುಲೇಖ ಒಂದು ಸಾಮಾಜಿಕ ಕಾದಂಬರಿ. ಹೆನ್ರಿಟಾ ಟೆಬ್ಲ್ (ಬಿಕನ್ಸಿ ಫೀಲ್ಡ್) ಇಲ್ಲವೆ ಪ್ರೈಡ್ ಅಂಡ್ ಪ್ರಿಜುಡಿಸ್ (ಜೇನ್ ಆಸ್ಟೆನ್) ಕಾದಂಬರಿಯನ್ನು ಓದಿದ್ದುದರಿಂದ ಈ ಕೃತಿರಚನೆಗೆ ಪ್ರೇರಣೆ ದೊರೆಕಿತೆಂದು ಹೇಳುತ್ತಾರೆ. ಆಧುನಿಕ ವಿದ್ಯಾವಂತನೊಬ್ಬನ ದೃಷ್ಟಿಯಲ್ಲಿ ಅಂದಿನ ಸಾಮಾಜಿಕ ಜೀವನ ಪ್ರತಿಫಲಿಸಿದುದರ ವಾಸ್ತವಿಕ ಚಿತ್ರಣ ಇದರಲ್ಲಿದೆ. ಆ ಕಾಲದಲ್ಲಿ ನಂಬೂದಿರಿಗಳೂ ನಾಯರುಗಳೂ ಎಷ್ಟೇ ಸುಸಂಸ್ಕೃತ ವರ್ಗದವರಾಗಿದ್ದರೂ ಬಹಳ ಕಾಲದಿಂದ ಅವರು ಕೇರಳದಲ್ಲಿ ನಿರ್ವಹಿಸುತ್ತ ಬಂದಿದ್ದ ಜಮೀನ್ದಾರಿ ಪದ್ಧತಿಯ ದುಷ್ಫಲಗಳು ಅವರನ್ನು ಕ್ರಮೇಣ ಅಧಃಪತನದ ಹಾದಿಗೆ ತಳ್ಳುತ್ತಿದ್ದುವು. ಅನಾಚಾರಗಳಾದರೋ ಅಸಂಖ್ಯ; ಒಂದು ಕಡೆ ಆರ್ಥಿಕ ಶೋಷಣೆ; ಇನ್ನೊಂದು ಕಡೆ ದಾಂಪತ್ಯ ಸಂಬಂಧ ಮತ್ತು ಕೌಟುಂಬಿಕ ಘಟನೆಯ ಶೈಥಿಲ್ಯಗಳು. ಹೀಗೆ ಸರ್ವತೋಮುಖವಾಗಿ ಸಂಭವಿಸುತ್ತಿದ್ದ ಭಗ್ನತೆಯನ್ನು, ಇಂಗ್ಲಿಷ್ ಸಾಹಿತ್ಯದ ಮೂಲಕ ಲಭಿಸಿದ ವೈಜ್ಞಾನಿಕ ಮುಂಬೆಳಕಿನಲ್ಲಿ ಚಂದುಮೇನೋನ್ ವಿವರವಾಗಿ ವೀಕ್ಷಿಸಿದ. ಸಾಮಾಜಿಕವಾದ ಆ ವಿಲಕ್ಷಣತೆಗಳು ಯಥಾರ್ಥ ರೂಪದಲ್ಲಿ ಆತನ ಮನೋಮುಕುರದಲ್ಲಿ ಪ್ರತಿಬಿಂಬಿಸಿದವು. ಇದರ ಪರಿಣಾಮವಾಗಿ ರೂಪುಗೊಂಡ ಕಲಾಸೃಷ್ಟಿಯೇ ಇಂದುಲೇಖ. ಇದರ ನಾಯಕ ನಾಯಕಿಯರಾದ ಮಾಧವ ಮತ್ತು ಇಂದುಲೇಖ ಹೊಸಪೀಳಿಗೆಯ ಪ್ರತಿನಿಧಿಗಳು. ಪಂಜು ಮೇನೋನ್, ಸೂರಿ ನಂಬೂದಿರಿ-ಇವರು ಅಧಃಪತನಗೊಂಡ ತಲೆಮಾರಿನ ಮಾದರಿಗಳು. ಈ ವಿಭಿನ್ನ ಸ್ವಭಾವದ ಜನರಲ್ಲಿ ನಡೆಯುವ ಸಂಘರ್ಷದ ಚಿತ್ರೀಕರಣ ಕಾದಂಬರಿಯಲ್ಲಿ ಸೊಗಸಾಗಿ ಮೂಡಿಬಂದಿದೆ.

ಕುಂಜನ್ ನಂಬಿಯಾರರ ಬಳಿಕ ಸಮಕಾಲೀನ ಸಮಾಜದ ವಿಲಕ್ಷಣತೆಗಳನ್ನು ಈತನಷ್ಟು ಧೈರ್ಯದಿಂದ ಪ್ರಕಟಿಸಿದವರು ಯಾರೂ ಇಲ್ಲವೆಂದೇ ಹೇಳಬೇಕು. ಇಂದುಲೇಖ ಉಂಟುಮಾಡಿದಷ್ಟು ಸಾಮಾಜಿಕ ಪರಿವರ್ತನೆ ಯಾವುದೇ ಸಂಘಟಿತ ಪಂಥದಿಂದಲೂ ಸಾಧ್ಯವಾಗಿರುವಂತೆ ಕಂಡುಬಂದಿಲ್ಲ. ಈತನ ವಿರುದ್ಧ ಸಂಪ್ರದಾಯವಾದಿಗಳಾದ ನಂಬೂದಿರಿಗಳೂ ನಾಯರರೂ ಕ್ರುದ್ಧರಾದರು. ಇದು ಚಂದುಮೇನೋನನ ವ್ಯಂಗ್ಯ ನೇರವಾಗಿ ಅವರಿಗೆ ತಾಕಿದೆಯೆಂಬುದಕ್ಕೆ ಸಾಕ್ಷಿ. ನಿಜವಾಗಿಯೂ ಆಧುನಿಕ ಕೇರಳದ ಸಾಮಾಜಿಕ ಪರಿಷ್ಕಾರದ ಮೊದಲ ಪ್ರಚೋದನೆ ಇಂದುಲೇಖದಿಂದ ಲಭ್ಯವಾಯಿತೆಂಬುದು ನಿಸ್ಸಂದೇಹ. ಅದಕ್ಕೂ ಮೊದಲು ಬಹಳ ಮಂದಿ ಅದರ ಬಗೆಗೆ ಮಾತನಾಡಿರಬಹುದು, ಬರೆದಿರಬಹುದು. ಆದರೆ ಪರಿಷ್ಕಾರಗೊಳ್ಳಬೇಕಾದ ಸಾಮಾಜಿಕ ಆಚಾರವಿಚಾರಗಳ ಬಗೆಗೆ ಜನಸಮೂಹ ಚೆನ್ನಾಗಿ ಆಲೋಚಿಸತೊಡಗಿದುದು ಇಂದುಲೇಖವನ್ನು ಓದಿದ ತರುವಾಯವೇ.

ಚಂದುಮೇನೋನ್ನ ಮತ್ತೊಂದು ಕೃತಿ ಶಾರದ. ಇದರ ಒಂದು ಭಾಗವನ್ನು ಮಾತ್ರ ಆತ ಪುರೈಸಿದ್ದ. ಎರಡನೆಯ ಭಾಗ ಬರೆಯಬೇಕೆನ್ನುವಷ್ಟರಲ್ಲಿ ಮೃತ್ಯುವಿಗೆ ತುತ್ತಾದ. ಅಪುರ್ಣವಾದರೂ ಶಾರದ ಸೊಗಸಾದ ಕಲಾಶಿಲ್ಪ, ಕಲಾವಿದನ ಪರಿಪಕ್ವತೆ ಇದರಲ್ಲಿ ಎದ್ದು ಕಾಣುತ್ತದೆ. ಇಂದುಲೇಖಕ್ಕಿಂತ ಶಾರದದಲ್ಲೇ ಈತನ ವ್ಯಕ್ತಿತ್ವ ಚೆನ್ನಾಗಿ ಗೋಚರಿಸುತ್ತದೆ. ನ್ಯಾಯಪೀಠಗಳು, ಅವನ್ನು ಆಶ್ರಯಿಸಿರುವ ವಕೀಲರು, ವ್ಯವಹಾರಪ್ರಿಯರು, ದಲ್ಲಾಳಿಗಳು ಮೊದಲಾದ ಬಗೆಬಗೆಯ ವ್ಯಕ್ತಿಗಳ ನಿಕಟಸಂಪರ್ಕವನ್ನು ಹೊಂದಿದ ಈತ ವಕೀಲನೂ ಆಗಿದ್ದ. ತನ್ನ ಅನುಭವದ ಸಾರವನ್ನು ಶಾರದದಲ್ಲಿ ಭಟ್ಟಿಯಿಳಿಸಿದ್ದಾನೆ.	(ಕೆ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ